ವಾರ್ಧಾ ಆಶ್ರಮ
	ಮಹಾತ್ಮಗಾಂಧೀೀಯವರು ಸ್ಥಾಪಿಸಿದ ಪ್ರಮುಖ ಆಶ್ರಮಗಳಲ್ಲಿ ಒಂದು. ಇದನ್ನು ಮಹಾರಾಷ್ಟ್ರದ ವಾರ್ಧಾನಗರಕ್ಕೆ ಸು. 8ಕಿಮೀ ದೂರದಲ್ಲಿ ಶೇಗಾಂವ್ ಎಂಬ ಹಳ್ಳಿಯ ಹತ್ತಿರದಲ್ಲಿ, ಗಾಂಧೀಯವರ ನೆಚ್ಚಿನ ಶಿಷ್ಯರಾದ ಸೇಠ್ ಜಮನಾಲಾಲ್ ಬಜಾಜ್ ಅವರ ಜಮೀನಿನಲ್ಲಿ ಗುಡಿಸಿಲಿನಂತೆ ಸ್ಥಾಪಿಸಲಾಯಿತು(1936). ಇದನ್ನು ಮುಂದೆ ಸೇವಾಗ್ರಾಮವೆಂದು ಕರೆಯಲಾಯಿತು. ಪ್ರಸ್ತುತ ಇದು ಪ್ರಸಿದ್ಧ ಪ್ರವಾಸಿತಾಣವಾಗಿದೆ. ಸಕ್ರಿಯ ರಾಜಕೀಯದಿಂದ ನಿವೃತ್ತರಾದ ಗಾಂಧೀಯವರು ಹರಿಜನೋದ್ಧಾರ, ಗ್ರಾಮೋದ್ಯೋಗ, ನೂತನ ಶಿಕ್ಷಣ, ಗೋಸೇವಾ ಮುಂತಾದ ಕಾರ್ಯಗಳಲ್ಲಿ ತೊಡಗಿಸಿಕೊಂಡರು. ಅನಂತರ ಇತರ ಕಾರ್ಯಕರ್ತರೂ ಅಲ್ಲಿಗೆ ಬಂದು ನೆಲೆಸಿದ್ದರಿಂದ ಕ್ರಮೇಣ ನಿವಾಸಿಗಳ ಸಂಖ್ಯೆ ಹೆಚ್ಚಾಯಿತು.
	ವಾರ್ಧಾ 1933ರ ಅನಂತರ ಗಾಂಧೀಯವರ ಕಾರ್ಯಚಟುವಟಿಕೆಗಳ ಪ್ರಮುಖ ಕೇಂದ್ರವಾಗಿತ್ತು. 1930ರಲ್ಲಿ ಸ್ವಾತಂತ್ರ್ಯ ಬರುವವರೆಗೆ ಸಾಬರಮತಿ ಆಶ್ರಮಕ್ಕೆ ಹಿಂತಿರುಗುವುದಿಲ್ಲವೆಂದು ಪ್ರತಿಜ್ಞೆ ಕೈಗೊಂಡ ಗಾಂಧೀಯವರು ಕಾನೂನು ಭಂಗ ಚಳವಳಿ ರದ್ದಾದ ಅನಂತರ ಗ್ರಾಮೋದ್ಧಾರ ಕಾರ್ಯಕ್ರಮಕ್ಕೆ ತಮ್ಮನ್ನು ಅರ್ಪಿಸಿಕೊಂಡರು. ಅವರು ರಾಷ್ಟ್ರೀಯ ಹೋರಾಟದ ಕೊನೆಯ 15ವರ್ಷಗಳನ್ನು ಸೇವಾಗ್ರಾಮದಲ್ಲೇ ಕಳೆದರು.
	ಕಾನೂನುಭಂಗ ಚಳವಳಿಯ ಸಂದರ್ಭದಲ್ಲಿ ಬಂಧಿತರಾಗಿದ್ದ ಅವರು ಮ್ಯಾಕ್‍ಡೊನಾಲ್ಡ್ ಮತೀಯ ತೀರ್ಪನ್ನು ನಿರಾಕರಿಸಿ ಭಾರತೀಯ ಸಮಾಜ ಬಿರುಕು ಬಿಡಬಾರದೆಂದು ದೃಢವಾಗಿ ವಾದಿಸಿದರು. ತರುವಾಯ ಪೂನಾ ಒಪ್ಪಂದವಾಯಿತು. ಅನಂತರ ಅವರು ವಾಡಾ ಸೆರೆಮನೆಯಲ್ಲಿದ್ದಾಗಲೇ ಅಸ್ಪøಶ್ಯತಾ ನಿವಾರಣಾ ಆಂದೋಲನವನ್ನು ದೇಶಾದ್ಯಂತ ಹಮ್ಮಿಕೊಳ್ಳಲು ದೃಢಸಂಕಲ್ಪ ಮಾಡಿದರು. ಎಲ್ಲ ಕಡೆ ಹರಿಜನ ಸೇವಕ ಸಂಘಗಳು ಸ್ಥಾಪಿತವಾದವಲ್ಲದೆ ಹರಿಜನ ಎಂಬ ಪತ್ರಿಕೆಯೂ ಆರಂಭವಾಯಿತು. ಜೊತೆಗೆ ಗಾಂಧೀಯವರು ಸವರ್ಣೀಯ ಹಿಂದುಗಳನ್ನು ಜಾಗೃತಗೊಳಿಸಲು 21ದಿನಗಳ ಆತ್ಮಶುದ್ಧಿ ಉಪವಾಸ ಕೈಗೊಂಡರು. ಸೆರೆಮನೆಯಿಂದ ಬಿಡುಗಡೆಯಾದ ಅನಂತರ ರಾಜಕೀಯ ಚಟುವಟಿಕೆಗಳಲ್ಲಿ ತೊಡಗದೆ ಅಸ್ಪøಶ್ಯತಾ ನಿವಾರಣ ಕಾರ್ಯಕ್ರಮಕ್ಕಾಗಿ ದೇಶಾದ್ಯಂತ ಪ್ರವಾಸ ಮಾಡುವುದಾಗಿ ನಿರ್ಧರಿಸಿದರು. ವಾರ್ಧಾಗೆ ಬಂದು ಅಲ್ಲಿಯ ಸತ್ಯಾಗ್ರಹ ಆಶ್ರಮದಿಂದ ಪ್ರವಾಸ ಆರಂಭಿಸಿದರು. ಎಂಟು ತಿಂಗಳ ಪ್ರವಾಸ ಮುಗಿಸಿ 1934ರ ಹೊತ್ತಿಗೆ ಅವರು ಹಿಂತಿರುಗಿದರು. ಈ ವೇಳೆಗೆ ಕಾನೂನು ಭಂಗ ಚಳವಳಿ ರದ್ದಾಗಿ ಕಾಂಗ್ರೆಸ್ಸಿನ ರಾಜಕೀಯದಿಂದ ತಾತ್ಕಾಲಿಕವಾಗಿ ಹಿಂದೆಗೆಯುವ ಮತ್ತು ಗ್ರಾಮ ಪುನರುಜ್ಜೀವನಕ್ಕೆ ತಮ್ಮ ಸೇವೆಯನ್ನು ಮುಡಿಪಾಗಿಡುವ ನಿಶ್ಚಯ ಮಾಡಿದರು. ಅತ್ಯಂತ ಹಿಂದುಳಿದಿದ್ದ ಶೇಗಾಂವ್ ಎಂಬ ಗ್ರಾಮದಲ್ಲಿ ಹರಿಜನರೇ ಹೆಚ್ಚಾಗಿದ್ದು ಸವರ್ಣೀಯರು ತೀರಾ ಕಂದಾಚಾರಿಗ ಳಾಗಿದ್ದು ಯಾವ ಸುಧಾರಣೆಗೂ ಆಸ್ಪದವಿರಲಿಲ್ಲ. ನೈರ್ಮಲ್ಯಕ್ಕೆ ಗಮನ ಕೊಡದ ತೀರಾ ಕೊಳಕಾದ ಗ್ರಾಮವಾಗಿತ್ತು. ಕಸ್ತೂರಬಾ, ಮಹದೇವ ದೇಸಾಯಿ, ಪ್ಯಾರೇಲಾಲ್, ಸುಶೀಲಾ ನಯ್ಯಾರ್ ಮೊದಲಾದವರು ಇಲ್ಲಿ ಬಂದು ಸೇರಿದರು. ಬಾಪು ಕುಟೀರ ಆಶ್ರಮವಾಯಿತು. ವಾರ್ಧಾದಿಂದ ಈ ಗ್ರಾಮಕ್ಕೆ ಓಡಾಡಲು ರಸ್ತೆಗಳಾಗಲಿ, ಇತರ ಮೂಲಭೂತ ಸೌಕರ್ಯಗಳಾಗಲಿ ಇರಲಿಲ್ಲ. ನೈರ್ಮಲ್ಯದ ಕೊರತೆಯಿಂದ ಮಲೇರಿಯ ರೋಗ ಹರಡಿ ಆ ಪ್ರದೇಶದ ಜನರೆಲ್ಲರನ್ನು ಆವರಿಸಿಕೊಂಡಿತು. ಆದರೂ ಅವರು ಧೃತಿಗೆಡದೇ ಸ್ವತಃ ತಾವೇ ಅನಾರೋಗ್ಯಕ್ಕೆ ತುತ್ತಾಗಿ, ಆರೋಗ್ಯ ಸುಧಾರಿಸಿದ ಕೂಡಲೇ ಗ್ರಾಮಕ್ಕೆ ಹಿಂದಿರುಗಿ ಗ್ರಾಮೋದ್ಧಾರ ಕಾರ್ಯಕ್ಕೆ ತೊಡಗಿಸಿಕೊಂಡರು. ಕ್ರಮೇಣ ಆಶ್ರಮವಾಸಿಗಳ ಸಂಖ್ಯೆ ಹೆಚ್ಚಾಗಿ ಅನೇಕ ಗುಡಿಸಲುಗಳು, ಕಟ್ಟಡಗಳು ನಿರ್ಮಾಣಗೊಂಡವು. ಶೇಗಾಂವ್ ಹಳ್ಳಿ ಸೇವಾಗ್ರಾಮವಾಯಿತು. ಅಂಚೆ ಕಛೇರಿ, ಆಸ್ಪತ್ರೆ, ಗೋಶಾಲೆ ಮುಂತಾದ ಮೂಲಭೂತ ಸೌಕರ್ಯಗಳನ್ನು ಗ್ರಾಮ ಪಡೆದುಕೊಂಡಿತು. ಅವರು ಪ್ರತಿಪಾದಿಸಿದ ಮೂಲಶಿಕ್ಷಣದ ಸಂಶೋಧನೆ ಹಾಗೂ ತರಬೇತಿ ಕೇಂದ್ರಗಳು, ಸೇವಾಗ್ರಾಮದಲ್ಲಿ ರೂಪುಗೊಂಡು ಗ್ರಾಮ ನೈರ್ಮಲ್ಯ, ಶಿಕ್ಷಣ, ಔಷಧೋಪಚಾರ, ಖಾದಿ ಹಾಗೂ ಗ್ರಾಮೋದ್ಯೋಗ ಕೇಂದ್ರಗಳ ಸ್ಥಾಪನೆಯಾದವು. ದಲಿತ ಯುವಕ ಗೋವಿಂದನನ್ನು ಆಶ್ರಮದ ಅಡುಗೆಕೆಲಸಕ್ಕೆ ನೇಮಿಸಿಕೊಳ್ಳಲಾಯಿತು. ಸೇವಾಗ್ರಾಮದಲ್ಲಿದ್ದ ನೀರಿನ ಬಾವಿಯನ್ನು ಉಪಯೋಗಿಸಲು ದಲಿತರಿಗೂ ಮುಕ್ತ ಅವಕಾಶ ನೀಡಲಾಯಿತು. ಅಸ್ಪøಶ್ಯತಾ ನಿವಾರಣಾ ಕಾರ್ಯಕ್ಕೆ ಆರಂಭದಲ್ಲಿ ಗ್ರಾಮಸ್ಥರಿಂದ ತೀವ್ರ ಅಸಹಕಾರ, ಪ್ರತಿಭಟನೆ ಕಂಡುಬಂದಿತಾದರೂ ಎರಡು ಮೂರು ವರ್ಷದೊಳಗೆ ಸೇವಾಗ್ರಾಮ ಸಾಕಷ್ಟು ಪ್ರಗತಿ ಸಾಧಿಸಿತು. ಅವರ ಆದರ್ಶಗ್ರಾಮದ ಕನಸನ್ನು ನನಸು ಮಾಡಲು ಸೇವಾಗ್ರಾಮ ಪ್ರಮುಖ ಪ್ರಯೋಗ ಕೇಂದ್ರವಾಯಿತು. ನೂರಾರು ಕೆಲಸಗಾರರು ಗ್ರಾಮಗಳಿಗೆ ಹೋಗಿ ರಚನಾತ್ಮಕ ಕಾರ್ಯಕ್ರಮಗಳನ್ನು ಆರಂಭಿಸಲು ಇದು ಅಪಾರ ಸ್ಫೂರ್ತಿ ನೀಡಿತು. ಸೇವಾಗ್ರಾಮ ದೇಶದ ರಾಜಕಾರಣವನ್ನು ಗ್ರಾಮಾಭಿಮುಖ ಮಾಡುವ ಪ್ರಯತ್ನಕ್ಕೆ ಸಂಕೇತವಾಯಿತು. ಮೀರಾಬೆಹನ್, ವಿನೋಬಾಭಾವೆ, ಕೀಶೋರಿಲಾಲ್, ಕಾಕಾ ಕಾಲೇಲ್ಕರ್, ಜೆ.ಸಿ.ಕುಮಾರಪ್ಪ ಮೊದಲಾದ ಅಸಂಖ್ಯಾತ ಗಾಂಧೀಯವರ ಅನುಯಾಯಿಗಳು ಈ ಆಶ್ರಮದಲ್ಲಿದ್ದರು. ಇಂದಿಗೂ ವಾರ್ಧಾದ ಹತ್ತಿರದ ಸೇವಾಗ್ರಾಮದಲ್ಲಿರುವ ಬಾಪೂ ಕುಟೀರ ಹಾಗೂ ಬಾ ಕುಟೀರಗಳು ರಾಷ್ಟ್ರೀಯ ಸ್ಮಾರಕಗಳಾಗಿವೆ. ಗಾಂಧೀಜಿ ಹಾಗೂ ಕಸ್ತೂರಬಾ ಬಳಸುತ್ತಿದ್ದ ವಸ್ತುಗಳನ್ನು ಸಂರಕ್ಷಿಸಲಾಗಿದೆ.
 (ನೋಡಿ- ಗಾಂಧೀ,-ಮೋಹನ್‍ದಾಸ್-ಕರಮ್‍ಚಂದ್)			
	(ಐ.ಬಿ.ಪಿ.)